Monday, 18 May 2015

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು - 3 RCI, DPEP, PWD, SSA, RTE,

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು
ಭಾಗ-3
1.      Rehabilitation Council of India Act 1992:
ಭಾರತೀಯ ಪುನರ್ವಸತಿ ಮಂಡಳಿ ಕಾಯ್ದೆ-1992:

          ಭಾರತೀಯ ಪುನರ್ವಸತಿ ಮಂಡಳಿಯು ಶಾಲೆಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿಲ್ಲದೆ ಇದ್ದರು, ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಅಗತ್ಯವಾದ ತರಬೇತಿಯನ್ನು ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ. ಮಂಡಳಿಯು ಶಿಕ್ಷಕರ ತರಬೇತಿ ಮಾತ್ರವಲ್ಲದೆ, ಮಾತಿನ ತರಬೇತಿ, ಚಲನವಲನ ತರಬೇತಿ ಹಾಗೂ ಇತರೆ ತರಬೇತಿಗಳನ್ನು ನೀಡುವ ಪುನರ್ವಸತಿ ತಜ್ಞರುಗಳಿಗೆ ಶಿಕ್ಷಣವನ್ನು ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ.
2.      The district Primary Education Programme (DPEP) 1994
ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ :
          DPEP ಯೋಜನೆಯನ್ನು ಆಯ್ದ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಲಾಯಿತು. ಇಲ್ಲಿಯೂ ಸಹ IEDC ತತ್ವವಾದ ‘ಸಮಗ್ರ ಶಿಕ್ಷಣ’ ತತ್ವವನ್ನು ಅನುಸರಿಸಲಾಯಿತು. ಆದರೆ ಎಲ್ಲಾ ವಿಕಲಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇವುಗಳಲ್ಲಿ ಬಹುಮುಖ್ಯವಾದದ್ದೆಂದರೆ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿರದಿದ್ದು ಮತ್ತು ಇವರೆಲ್ಲ ಸೇವಾನಿರತ ಶಿಕ್ಷಕರಾಗಿದದ್ದು. ಈ ಸಮಸ್ಯೆಯನ್ನು ಪರಿಹರಿಸಲು RCI 45 ದಿನಗಳ ತರಬೇತಿ ಕಾರ್ಯಕ್ರಮವನ್ನು ಅಭಿವೃದ್ದಿಪಡಿಸಿತು. 24 ರಾಜ್ಯಗಳ 271 ಜಿಲ್ಲೆಗಳಲ್ಲಿ DPEP ಯೋಜನೆಯನ್ನು ಅನುಷ್ಟಾನಗೊಳಿಸಲಾಯಿತು.
3.   Person with Disability Act 1995:
ಅಂಗವಿಕಲ ವ್ಯಕ್ತಿಗಳ ಅಧಿನಿಯಮ 1995:

                ಅಂಗವಿಕಲ ವ್ಯಕ್ತಿಗಳ ಅಧಿನಿಯಮವು ವಿಕಲಚೇತನರ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿಯನ್ನು ಮಾಡಿತು. ಸರ್ಕಾರಿ ಮತ್ತು ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ವಿಕಲಚೇತನ ಮಕ್ಕಳಿಗೆ 3% ರಷ್ಟು ಪ್ರವೇಶ ಮೀಸಲಾತಿಯನ್ನು ನೀಡಬೇಕು ಎಂದು ಹೇಳಿದೆ. ವಿಕಲಚೇತನ ಮಕ್ಕಳಿಗೆ 6 ರಿಂದ 18 ವರ್ಷಗಳವರೆಗೆ ಶಿಕ್ಷಣವನ್ನು ನೀಡಬೇಕು ಮತ್ತು  ಆಯಾ ಸರ್ಕಾರಗಳು ವಿಕಲಚೇತನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿದೆ. ವಿಕಲಚೇತನ ಮಕ್ಕಳಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಆಯಾ ಸರ್ಕಾರಗಳು ಒದಗಿಸಬೇಕು ಎಂದು ಹೇಳಿದೆ.
4.      Sarva Siksha Abhiyan (SSA) 2000:
ಸರ್ವ ಶಿಕ್ಷಣ ಅಭಿಯಾನ 2000:

          2010ರ ವೇಳೆ ಭಾರತದ್ಯಾಂತ ಎಲ್ಲರಿಗೂ ಶಿಕ್ಷಣ ನೀಡುವ ಗುರಿಯೊಂದಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು 2000-01ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿತು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ರಾಜ್ಯಗಳ ಸಹಯೋಗದಲ್ಲಿ ಮತ್ತು ಸ್ವಯಂ ಸೇವಕರ ನೆರವಿನಿಂದ ಯೋಜನೆಯನ್ನು ಅನುಷ್ಟಾನಗೊಳಿಸಲಾಯಿತು. SSA ವಿಕಲಚೇತನ ಮಕ್ಕಳನ್ನು ಒಳಗೊಂಡಂತೆ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಗುರಿಜಯನ್ನು ಹೊಂದಿತ್ತು. ಈ ಯೋಜನೆಯು ಶಿಕ್ಷಕರಿಗೆ ತರಬೇತಿ ನೀಡುವ, ಬೋಧನಾ-ಕಲಿಕಾ ಸಾಮಾಗ್ರಿಗಳನ್ನು ಒದಗಿಸುವ ಯೋಜನೆಗಳನ್ನು ಹೊಂದಿದೆ.
5.      Right to Education Act (RET) 2009:
ಶಿಕ್ಷಣ ಹಕ್ಕು ಕಾಯ್ದೆ 2009:

          ಭಾರತ ಸರ್ಕಾರವು 2009ರ ಆಗಷ್ಟ್ 26ರಂದು ಭಾರತದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ಉದ್ದೇಶದೊಂದಿಗೆ ಈ ಕಾಯ್ದೆಯನ್ನು ಜಾರಿಗೆ ತಂದಿತು. 6 ರಿಂದ 14 ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ಅವರ ನೆರೆಹೊರೆಯಲ್ಲಿರು ಶಾಲೆಯಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರೆ, ಮಗುವಿನ ಲಿಂಗ, ಜಾತಿ, ಧರ್ಮ, ವಿಕಲತೆ ಮತ್ತು ಇತರೆ ಯಾವುದೆ ನೆಲೆಗಳ ಆಧಾರದಲ್ಲಿ ಬೇಧ ಬಾವ ಮಾಡಬಾರದು. ಎಂದು ಕಾಯ್ದೆಯು ಹೇಳುತ್ತದೆ. ವಿಕಲಚೇತನ ಮಕ್ಕಳನ್ನು ಗುರುತಿಸುವ, ಶಾಲೆಗೆ ದಾಖಲು ಮಾಡುವ ಮತ್ತು ಶಾಲೆಯ ಎಲ್ಲಾ ಕಾರ್ಯಗಳಲ್ಲಿ ಮಕ್ಕಳು ಭಾಗವಹಿಸುವುದನ್ನು ಮೇಲ್ವಿಚಾರಣೆ ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿದೆ.

ವಿಶ್ವ ಸಂಸ್ಥೆಯು 2006ರ ಡಿಸೆಂಬರ್ 13 ರಂದು ವಿಕಲಚೇತನರ ಹಕ್ಕುಗಳ ಒಡಂಬಡಿಕೆಗೆ (UNCRPD - Convention on the Rights of Persons with Disabilities) ಸದಸ್ಯ ರಾಷ್ಟ್ರಗಳಿಂದ ಅನುಮೋದನೆಯನ್ನು ಪಡೆಯಿತು. ಭಾರತ ಸರ್ಕಾರವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವುದರಿಂದ UNCRPDಗೆ ಸಹಿ ಹಾಕಿದೆ. ಈ ಒಡಂಬಡಿಕೆಯನ್ನು ಅನುಷ್ಟಾನಗೊಳಿಸುವುದು ಭಾರತದ ಕರ್ತವ್ಯವಾಗಿತ್ತು. ಈ ದಿಸೆಯಲ್ಲಿ 2011 ರಲ್ಲಿ ಲೋಕಸಭೆಯಲ್ಲಿ ಈ ಬಿಲ್‌ನ್ನು ಪ್ರಸ್ತುತ ಪಡಿಸಲಾಯಿತು. ಈ ಕಾಯ್ದೆಯು ವಿಕಲಚೇತನರಿಗೆ ನಿರ್ಣಯಕವಾಗಿದ್ದ ಕಾರಣ ದೀರ್ಘ ಚರ್ಚೆ ಮತ್ತು ಹಲವಾರು ತಿದ್ದುಪಡಿಗಳೊಂದಿಗೆ 2016ರಲ್ಲಿ ಕಾಯ್ದೆಯಾಗಿ ಜಾರಿಗೆ ಬಂದಿತು. RPWD 2016 ಕಾಯ್ದೆಯು 1995ರ PWD ಕಾಯ್ದೆಯ ಬದಲಿಗೆ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆಯ ಮತ್ತೊಂದು ಪ್ರಮುಖವಾದ ಅಂಶವೆAದರೆ ವಿಕಲತೆಗಳ ಸಂಖ್ಯೆ. 1995ರ ಕಾಯ್ದೆಯಲ್ಲಿ ಕೇವಲ 7 ವಿಕಲತೆಗಳಿಗೆ ಮಾತ್ರ ಕಾನೂನಾತ್ಮಕ ಸ್ಥಾನಮಾನ ಲಭ್ಯವಾಗಿತ್ತು. ಆದರೆ 2016ರ RPWD  ಕಾಯ್ದೆಯಲ್ಲಿ ಈ ಸಂಖ್ಯೆಯನ್ನು 21ಕ್ಕೆ ಏರಿಸಲಾಯಿತು. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ನ್ಯೂನತೆವುಳ್ಳ ವ್ಯಕ್ತಿಗಳು ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗುವಂತಾಯಿತು.

        ಸೆಕ್ಷನ್ 16 ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ವಿವರಣೆಯನ್ನು ನೀಡುತ್ತಾ, ಸಮುಚಿತ ಸರ್ಕಾರದ ಅನುದಾನದಿಂದ ಅಥವಾ ಮಾನ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಸಮನ್ವಯ ಶಿಕ್ಷಣವನ್ನು ನೀಡಲು ಸೂಚಿಸಿದೆ. ಮುಂದುವರೆದು ಯಾವುದೇ ರೀತಿಯ ಬೇಧಭಾವಗಳನ್ನು ಮಾಡದೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸಹ ಬೇಧಭಾವ ಮಾಡಬಾರದೆಂದು ತಿಳಿಸಿದೆ. ಇಷ್ಟೆ ಅಲ್ಲದೆ ಈ ಕೆಳಗಿನ ಅವಕಾಶಗಳನ್ನು ಕಲ್ಪಿಸಿದೆ.

  • ಶಾಲೆಯ ಕಟ್ಟಡ ಮತ್ತು ಆವರಣವನ್ನು ಅಡೆತಡೆ ರಹಿತ ಮಾಡುವುದು
  • ಅಂಧ ಅಥವಾ ಶ್ರವಣದೋಷವುಳ್ಳ ಅಥವಾ ಉಭಯದೋಷಗಳನ್ನು ಹೊಂದಿರುವ ಮಕ್ಕಳಿಗೆ ಹೆಚ್ಚು ಸೂಕ್ತವಾದ ಭಾಷೆಗಳ ಮತ್ತು ಸಂವಹನ ಮಾರ್ಗಗಳ ಮೂಲಕ ಬೋದಿಸುವುದನ್ನು ಖಾತ್ರಿ ಪಡಿಸಬೇಕು
  • ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಲು ಸೂಚಿಸಿದೆ.
ಸೆಕ್ಷನ್ 17 ಸಮನ್ವಯ ಶಿಕ್ಷಣವನ್ನು ಉತ್ತೇಜಿಸಲು ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳ ಬಗ್ಗೆ ಹಾಗೂ ಸೆಕ್ಷನ್ 16ರ ಉದ್ದೇಶಗಳನ್ನು ಈಡೆರಿಸುವುದಕ್ಕೆ ಸಂಬಧಿಸಿದೆ.
  • ಪ್ರತಿ 5 ವರ್ಷಗಳಿಗೊಮ್ಮೆ ಸಮೀಕ್ಷೆಗಳನ್ನು ಕೈಗೊಳ್ಳುವ ಮೂಲಕ ಶಾಲೆಗೆ ತೆರಳುವ ವಿಕಲಚೇತನ ಮಕ್ಕಳನ್ನು ಗುರುತಿಸಬೇಕು ಹಾಗೂ ಮಕ್ಕಳ ಅಗತ್ಯತೆಗಳು ಯಾವ ಮಟ್ಟದಲ್ಲಿ ಪೂರೈಸಲಾಗಿದೆ ಎಂದು ತಿಳಿಯಬೇಕು ಮತ್ತು ಮೊದಲನೆಯ ಸಮೀಕ್ಷೆಯನ್ನು ಕಾಯ್ದೆ ಕಾರ್ಯಾರಂಭಿಸಿದ 2 ವರ್ಷಗಳ ಒಳಗೆ ಕೈಗೊಳ್ಳುವುದು
  • ಸಾಕಷ್ಟು ಸಂಖ್ಯೆಯ ಶಿಕ್ಷಕರ ತರಬೇತಿ ಕೇಂದ್ರಗಳನ್ನು ತೆರೆಯುವುದು
  • ಸನ್ನೆ ಭಾಷೆ ಹಾಗೂ ಬ್ರೈಲ್ ಲಿಪಿ ವಿಷಯಗಳಲ್ಲಿ ತೇರ್ಗಡೆಯಾಗಿರುವ ವಿಕಲಚೇತನ ಶಿಕ್ಷಕರು ಸಹ ವಿಕಲಚೇತನ ಮಕ್ಕಳಿಗೆ ಬೋಧಿಸಲು ಅವಕಾಶ ನೀಡುವುದು
  • ಶಾಲಾ ಶಿಕ್ಷಣದ ಎಲ್ಲಾ ಮಟ್ಟಗಳಲ್ಲೂ ಸಾಕಷ್ಟು ಸಂಖ್ಯೆಯ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು 
  • 18 ವರ್ಷಗಳ ವರೆಗೂ ವಿಕಲಚೇತನ ಮಕ್ಕಳಿಗೆ ಪುಸ್ತಕ, ಕಲಿಕೋಪಕರಣ ಹಾಗೂ ಸಹಾಯಕ ಸಾಧನಗಳನ್ನು ಉಚಿತವಾಗಿ ವಿತರಿಸುವುದು
  • ತರಗತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡುವುದು
  • ವಿಕಲಚೇತನ ಮಕ್ಕಳಿಗೆ ಪಠ್ಯಕ್ರಮ ಮತ್ತು ಪರೀಕ್ಷೆಗಳಲ್ಲಿ ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕೆಂದು. ಪರೀಕ್ಷೆಗಳಲ್ಲಿ ಉತ್ತರಿಸಲು ಹೆಚ್ಚಿನ ಸಮಯವನ್ನು ನೀಡುವುದು, ಪರೀಕ್ಷೆ ಬರೆಯಲು ಬರಹಗಾರರ ಸೌಲಭ್ಯ ಒದಗಿಸುವುದು, ದ್ವಿತೀಯ ಮತ್ತು ತೃತೀಯ ಭಾಷೆಗಳಿಂದ ವಿನಾಯ್ತಿ ನೀಡಡುವುದು
  • ವಿಕಲಚೇತನ ಮಕ್ಕಳ ಕಲಿಕಾ ಮಟ್ಟ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು


ಸೆಕ್ಷನ್ 18 ವಿಕಲಚೇತನ ವ್ಯಕ್ತಿಗಳಿಗೆ ವಯಸ್ಕರ ಶಿಕ್ಷಣವನ್ನು ನೀಡಲು ಸಮುಚಿತ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

******

Thursday, 7 May 2015

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು - 2 - NPE, PIED, POA

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು   

ಭಾಗ - 2 

1.      National Policy on Education (NPE) 1986:
ಶಿಕ್ಷಣ ಕುರಿತ ರಾಷ್ಟ್ರೀಯ ನೀತಿ:
          ಈ ಶಿಕ್ಷಣ ನೀತಿಯು ವಿಶೇಷ ಶಾಲೆಗಳಿಗೆ ಉತ್ತಮ ಚೌಕಟ್ಟನ್ನು ನೀಡಿದೆ. ಜೊತೆಗೆ ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಮಕ್ಕಳು ಕಲಿಯುವಂತೆ ಅವಕಾಶ ನೀಡಿದೆ. ನೀತಿಯುಎಲ್ಲಾ ವಿದಧ ದೈಹಿಕ ಮತ್ತು ಮಾನಸಿಕ ವಿಕಲತೆಯನ್ನು ಹೊಂದಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಎಲ್ಲರಂತೆ ಮಗು ಬೆಳವಣಿಗೆ ಹೊಂದಲು, ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸುವಂತೆ ಮಾಡುವಉದ್ದೇಶವನ್ನು ಹೊಂದಿದೆ.
          ಶಿಕ್ಷಣ ನೀತಿಯು mild ಮತ್ತು moderate ಮಟ್ಟದ ವಿಕಲತೆಯನ್ನು ಹೊಂದಿರುವ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ಹಾಗೂ severe ಮಟ್ಟದ ವಿಕಲಚೇತನ ಮಕ್ಕಳಿಗೆ ವಿಶೇಷ ಶಾಲೆಗಳಲ್ಲಿ ಶಿಕ್ಷಣವನ್ನು ನೀಡಲು ಇದು ಸೂಚಿಸಿತು. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಒಂದು ವಿಶೇಷ ಶಾಲೆಯನ್ನು ತೆರೆಯಲು ಇದು ಯೋಜಿಸಿತ್ತು.
2.      Project Integrated Education for the Disabled (PIED)-1986:
ವಿಕಲಚೇತನರಿಗಾಗಿ ಸಮಗ್ರ ಶಿಕ್ಷಣ ಯೋಜನೆ:
            1986 ರಲ್ಲಿ ಶಿಕ್ಷಣ ಕುರಿತ ರಾಷ್ಟ್ರೀಯ ನೀತಿ ಮತ್ತು UNICEF ನ ಸಹಯೋಗದಲ್ಲಿ ಸಮಗ್ರ ಶಿಕ್ಷಣಕ್ಕೆ ಸಂಬಂಧಿಸಿದಂತೆ 10 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡಂತೆ ಒಂದು ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, “ ಸಾಮಾನ್ಯ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರ ಶಿಕ್ಷಣ ನೀಡುವುದಕ್ಕೆ ಸಿದ್ದಪಡಿಸುವುದು”. ಶಿಕ್ಷಕರ ತರಬೇತಿ ಈ ಯೋಜನೆಯ ಅತಿ ಕಷ್ಟಕರವಾದ ಅಂಶವಾಗಿತ್ತು. ಈ ಯೋಜನೆಯ ಮೂಲಕ ತಿಳಿದು ಬಂದ 2 ಮುಖ್ಯ ಅಂಶಗಳೆಂದರೆ,
  1.     PIED ಬ್ಲಾಕ್ ನಲ್ಲಿದ್ದ ವಿಕಲಚೇತನ ಮಕ್ಕಳು ಸಾಮಾನ್ಯ ಮಕ್ಕಳ ಸಮಕ್ಕೆ ಸಾಧನೆ ಮಾಡಿದ್ದರು. ಆದರೆ ಬುದ್ದಿಮಾಂದ್ಯ ಮಕ್ಕಳು ಇತರೆ ಸಾಮಾನ್ಯ ಮಕ್ಕಳ ಸಮಕ್ಕೆ ಸಾಧನೆ ತೋರಲಾಗಲಿಲ್ಲ.
  2.      ಧಾರಣೆಯ ಶಕ್ತಿ ವಿಕಲಚೇತನ ಮಕ್ಕಳಲ್ಲಿ ಅತಿ ಹೆಚ್ಚು ಇತ್ತು. (ಶೇ.95% ಕಿಂತಲೂ ಹೆಚ್ಚು) ಇದು PIED ಬ್ಲಾಕ್ ನಲ್ಲಿದ್ದ ಇತರೆ ಸಾಮಾನ್ಯ ಮಕ್ಕಳಿಗಿಂತಲೂ ಸಹ ಹೆಚ್ಚುಯಿತ್ತು.
       ಹೀಗೆ ಪತ್ತೆಯಾದ 2 ಅಂಶಗಳು ಮುಂದೆ 1992IEDC ಯೋಜನೆಯ ಪರಿಷ್ಕರಣೆಯಲ್ಲಿ ಅತಿ ಮುಖ್ಯ ಪಾತ್ರವನ್ನು ನಿರ್ವಹಿಸಿತು. ವಿಶೇಷ ಶಾಲೆಯಲ್ಲಿರುವ ವಿಕಲಚೇತನ ಮಗು ಸಂಪರ್ಕಕ್ಕೆ ಅಗತ್ಯವಾದ ಭಾಷೆ ಮತ್ತು ದೈನಂದಿನ ಕಾರ್ಯಗಳನ್ನು ಮಾಡುವ ಮಟ್ಟದಲ್ಲಿ ಇರುವುದರಿಂದ ಅವರನ್ನು ಸಾಮಾನ್ಯ ಶಾಲೆಗೆ ದಾಖಲು ಮಾಡುವ ಬಗ್ಗೆ ಚಿಂತಿಸುವಂತೆ ಮಾಡಿತು. ಈ ಮೂಲಕ ವಿಶೇಷ ಮಕ್ಕಳು ಸಾಮಾನ್ಯ ಶಾಲೆಯನ್ನು ಸೇರುವ ಅವಕಾಶ ದೊರೆಯಿತು.

3.      The Programme of Action (POA) 1992
          ಪ್ರೋಗ್ರಾಮ್ ಆಫ್ ಆಕ್ಷನ್ 1992ನ್ನು ರಚಿಸಿದಾಗ ಇದು 12.39 ಮಿಲಿಯನ್ ವಿಕಲಚೇತನ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣವನ್ನು ನೀಡಲು ಅಂದಾಜಿಸಿತ್ತು. ನಂತರ ಮತ್ತೆ 2 ಮಿಲಿಯನ್ ಮಕ್ಕಳಿಗೆ ಶೀಘ್ರ ನಿರ್ವಹಣ ತಂಡದಿಂದ ಮತ್ತು ಇತರೆ ಮೂಲಗಳಿಂದ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸಲಾಯಿತು. PIED ಯಿಂದ ತಿಳಿದುಬಂದ ಅಂಶಗಳನ್ನು ಇದು ಪುರ್ಬಬಲನಗೊಳಿಸಿತು. ವಿಕಲಚೇತನ ಮಕ್ಕಳನ್ನು ಸಾಮಾನ್ಯ ಶಾಲೆಯಲ್ಲಿ ಓದುವ ಮಟ್ಟದಲ್ಲಿದ್ದರೆ ಸಾಮಾನ್ಯ ಶಾಲೆಗೆ ಸೇರಿಸಬೇಕು. ವಿಶೇಷ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ದೈನಂದಿನ ಕಾರ್ಯಗಳನ್ನು ಮಾಡುವ ಹಂತಕ್ಕೆ ಬಂದಾಗ, ಸಂಪರ್ಕವನ್ನು ಮಾಡುವಷ್ಟು ಮಾತಿನ ಕೌಶಲ್ಯ ಗಳಿಸಿದ ನಂತರ ಸಾಮಾನ್ಯ ಶಾಲೆಗೆ ದಾಖಲು ಮಾಡಬೇಕೆಂದು ತಿಳಿಸಿದೆ. POA ಸಾಮಾನ್ಯ ಶಿಕ್ಷರಿಗೆ ತರಬೇತಿ ನೀಡುವ, ವಿಶೇಷ ಬೋಧನಾ ಕಲಿಕಾ ಸಾಮಾಗ್ರಿಗಳನ್ನು ಅಭಿವೃದ್ದಿಪಡಿಸುವ, ಶೈಕ್ಷಣಿಕ ಸಾಧನಾ-ಸಲಕರಣೆಗಳನ್ನು ನೀಡುವ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಮತ್ತು ಸಂಪನನ್ಮೂಲ ಕೊಠಡಿಯ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತಿತ್ತು. 
                                                                                           ಮುಂದುವರೆಯುವುದು.....

D.Ed.SE.HI Hindi Question Papers